ಕಾಲಮಿತಿ ಕಾನೂನು

ಒಂದು ಸ್ವತ್ತಿನ ಹಕ್ಕುದಾರ ದಾವ ಹೂಡಿ ತನ್ನ ಹಕ್ಕನ್ನು ಸ್ಥಾಪಿಸಿಕೊಳ್ಳಲು ಪರಿನಿಯಮಾನುಗುಣವಾಗಿ ಇರತಕ್ಕ ಕಾಲದ ಅವಧಿ ನಿರ್ಣಯಿಸುವ ಕಾನೂನು(ಲಾ ಆಫ್ ಲಿಮಿಟೇಷನ್).

ಸ್ವತ್ತಿಗೆ ಸಂಬಂಧಿಸಿದ ಹಕ್ಕುಗಳು ಒಡೆತನದಿಂದ ಇಲ್ಲವೆ ಅನುಭವದಿಂದ ಹುಟ್ಟುತ್ತವೆ. ಕಾನೂನುನ ಪ್ರಕಾರ ಎಲ್ಲ ಸ್ವತ್ತೂ ಒಡೆತನಕ್ಕೆ ಒಳಪಟ್ಟಿರಬೇಕು. ಒಡೆತನವಿಲ್ಲದ ಸ್ವತ್ತು ಇರುವುದಕ್ಕೆ ಕಾಯಿದೆಯಲ್ಲಿ ಅವಕಾಶವಿಲ್ಲ. ಒಡೆಯನಿಗೆ ಅಥವಾ ಮಾಲೀಕನಿಗೆ ಸ್ವತ್ತುನ್ನು ಅನುಭವಿಸುವ ಹಕ್ಕು ಇದ್ದಾಗ್ಯೂ ಅವನೇ ಸ್ವತ್ತುನ್ನು ಅನುಭವಿಸಬೇಕೆಂಬ ನಿಯಮವಿಲ್ಲ. ಒಡೆತನದ ಅಥವಾ ಮಾಲೀಕತ್ವದ ಹಕ್ಕುಗಳು ಕಾಯಿದೆಯಿಂದ ಪ್ರಾಪ್ತವಾಗುತ್ತವೆ. ಆದರೆ ಅನುಭವದ ಹಕ್ಕುಗಳು ಪ್ರತ್ಯಕ್ಷ ಅನುಭವ ಅಥವಾ ಸ್ವಾಧೀನದ ಪರಿಸ್ಥಿತಿಯಿಂದ ಹುಟ್ಟುತ್ತವೆ. ಒಬ್ಬ ಮಾಲೀಕನ ಸ್ವತ್ತು ಬೇರೆಯವರ ಸ್ವಾಧೀನಾನುಭವದಲ್ಲಿರುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯ. ಸಾಧಾರಣವಾಗಿ ಮಾಲೀಕನಿಂದ ಅಧಿಕಾರ ಪಡೆದವರು ಅಥವಾ ಅವನ ಸಮ್ಮತಿಯಿಂದ ಬೇರೆಯವರು ಅವನ ಸ್ವತ್ತುನ್ನು ಅನುಭವಿಸುವುದಕ್ಕೆ ಅವಕಾಶವಿದೆ. ಇದೇ ರೀತಿ ಮಾಲೀಕನ ಹಕ್ಕುಗಳನ್ನು ಕಡೆಗಣೆಸಿ ತಾನೇ ಮಾಲೀಕನೆಂದು ಬಹಿರಂಗವಾಗಿ ಪ್ರತಿಪಾದಿಸುತ್ತ ಆಸ್ತಿಯನ್ನು ಅನುಭವಿಸುವುದು ಕಂಡು ಬರುತ್ತದೆ. ಮಾಲೀಕನ ಅನುಮತಿಯ ಪ್ರಕಾರ ಸ್ವತ್ತುನ್ನು ಬೇರೆ ಅನುಭವಿಸಿದರೆ ಇದರಿಂದ ಮಾಲೀಕನ ಹಕ್ಕುಗಳಿಗೆ ಯಾವ ತೊಂದರೆಯೂ ಉಂಟಾಗದು. ಕೇವಲ ಅನುಭವದಿಂದ ಮಾಲೀಕನ ವಿರುದ್ಧ ಯಾವ ಹಕ್ಕುಗಳೂ ಪ್ರಾಪ್ತವಾಗಲಾರವು. ಆದರೆ ಮಾಲೀಕನ ಹಕ್ಕುಗಳನ್ನು ಬಹಿರಂಗವಾಗಿ ಅಲ್ಲಗಳೆದು ಬೇರೆಯವರು ಅನುಭವಿಸಿದರೆ ಇದರಿಂದ ಮಾಲೀಕನ ಹಕ್ಕುಗಳು ನಷ್ಟವಾಗುತ್ತವೆ: ಮತ್ತು ವಿರುದ್ಧ ಸ್ವಾಧೀನ ಅಥವಾ ಅನುಭವದಿಂದ ಹಕ್ಕುಗಳು ಹುಟ್ಟುತ್ತವೆ.

ಎಲ್ಲ ನಾಗರಿಕ ದೇಶಗಳಲ್ಲೂ ಜನರು ತಮ್ಮ ಒಡೆತನದ ಹಕ್ಕುಗಳನ್ನು ಸ್ಥಾಪಿಸಿಕೊಳ್ಳಲು ಕಾಲಪರಿಮಿತಿ ಇಲ್ಲವೆ ಮುದ್ದತ್ತನ್ನು ಕಾನೂನಿನಿಂದ ನಿಯಂತ್ರಿಸಲಾಗಿದೆ. ಆ ಕಾಲಪರಿಮಿತಿಯಲ್ಲಿ ಇವನ್ನು ಸ್ಥಾಪಿಸಲು ಕ್ರಮತೆಗೆದುಕೊಳ್ಳದೆ ಇದ್ದಲ್ಲಿ ಇಂಥ ಹಕ್ಕುಗಳನ್ನು ಆ ಅವಧಿಯ ಅನಂತರ ಸ್ಥಾಪಿಸಿಕೊಳ್ಳುವುದಕ್ಕೆ ಕಾಯಿದೆಯ ಆತಂಕವಿದೆ. ಮುದ್ದತಿ ಕಾಯಿದೆ ಯಾವುದೇ ಹಕ್ಕುಗಳನ್ನೂ ನಿರ್ಮಾಣ ಮಾಡುವುದಿಲ್ಲ ಮತ್ತು ಅಸ್ತಿತ್ವಕ್ಕೆ ತರುವುದಿಲ್ಲ. ಹಕ್ಕುಗಳನ್ನೂ ಸ್ಥಾಪನೆ ಮಾಡಿಕೊಳ್ಳುವ ವಿಧಾನ ಅಥವಾ ಚಿಕತ್ಸಕ ಮಾರ್ಗಗಳಿಗೆ ಮಾತ್ರ ಈ ಕಾಯಿದೆ ಸಂಬಂಧ ಪಟ್ಟಿರುವುದರಿಂದ ಮೂಲ ಒಡೆತನದ ಹಕ್ಕುಗಳ ಇರುವಿಕೆಗೆ ಇದು ಸಂಬಂಧ ಪಡುವುದಿಲ್ಲ. ಅಸ್ತಿತ್ವದಲ್ಲಿರುವ ಹಕ್ಕುಗಳನ್ನು ಪ್ರತಿಪಾದನೆ ಮಾಡುವುದಕ್ಕೆ ಮಾತ್ರ ಕಾಲಪರಿಮಿತಿ ಅನ್ವಯಿಸುತ್ತದೆ. ಮುದ್ದತಿ ಕಾಯಿದೆಯ ಪ್ರಯೋಜನವನ್ನು ಪಡೆಯಬೇಕಾದರೆ ಹಕ್ಕುಗಳ ಪ್ರತಿಪಾದನೆಯನ್ನು ಕಾಲಾವಧಿಯೊಳಗಾಗಿ ಮಾಡಬೇಕಾಗುತ್ತದೆ.

ಒಬ್ಬ ಒಡೆತನದಲ್ಲಿರುವ ಸ್ವತ್ತು ಅನಧಿಕಾರ ಅಥವಾ ಗೈರ್‍ಹಕ್ಕಿನಿಂದ ಬೇರೆಯವರ ಸ್ವಾಧೀನಾನುಭವಕ್ಕೊಳಗಾದರೆ ಮಾಲೀಕ ತನ್ನ ಹಕ್ಕುಗಳನ್ನು ಕಾಲಪರಿಮಿತಿಯೊಳಗಾಗಿ ಸ್ಥಾಪಿಸಿಕೊಳ್ಳಬೇಕು. ಅದರ ಅನಂತರ ಈ ಹಕ್ಕುಗಳನ್ನು ಸ್ಥಾಪಿಸಿಕೊಳ್ಳುವ ಹಕ್ಕು ನಷ್ಟವಾಗುತ್ತದೆ. ಇದರ ಪರಿಣಾಮವಾಗಿ ಅನಧಿಕಾರದಿಂದ ಪರರ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡು ಅನುಭವಿಸುವವನಿಗೆ ಕಾಲಾವಧಿಯ ಅನಂತರ ಕೇವಲ ಅನುಭವ ಮಾತ್ರದಿಂದಲೇ ಒಡೆತನದ ಹಕ್ಕು ಪ್ರಾಪ್ತವಾಗುತ್ತದೆ.

ದೀರ್ಘಾನುಭವ ಅಥವಾ ವಹಿವಾಟಿ ಹಕ್ಕು: ದೀರ್ಘಾನುಭವವನ್ನು ವಿದ್ವಾಂಸರು ಸಾಮಾನ್ಯವಾಗಿ ಎರಡು ವಿಧವಾಗಿ ಪರಿಗಣಿಸಿದ್ದಾರೆ: 1 ಸಕ್ರಿಯ ಅಥವಾ ಹಕ್ಕುಗಳನ್ನು ಪಡೆಯಯವ ಅನುಭವ ಮತ್ತು 2 ನಿಷ್ಕ್ರಿಯ ಅಥವಾ ಹಕ್ಕುಗಳನ್ನು ಕಳೆದುಕೊಳ್ಳುವ ಅನುಭವ ಸಕ್ರಿಯ ಅನುಭವದಿಂದ ಹಕ್ಕುಗಳು ಊರ್ಜಿತವಾಗುತ್ತವೆ. ನಿಷ್ಕ್ರಿಯ ಅನುಭವದಿಂದ ಹಕ್ಕುಗಳು ಕಾಲಪರಿಮಿತಿಯ ಅನಂತರ ನಷ್ಟವಾಗುತ್ತವೆ. ಕಾಲಮಿತಿ ಹೀಗೆ ಎರಡು ವಿರುದ್ಧ ಪರಿಣಾಮಗಳನ್ನು ಉಂಟುಮಾಡುತ್ತದೆ. ಯಾವ ಸ್ವತ್ತಿನ ಸಂಬಂಧವಾದ ಪರಸ್ವಾಧೀನಾನುಭವದಿಂದ ಒಡೆಯನ ಹಕ್ಕುಗಳು ನಷ್ಟವಾಗುತ್ತವೆಯೋ ಅದೇ ಯೋಗದಿಂದ ಆಸ್ತಿಯನ್ನು ಧಾರಣ ಮಾಡುವ ಅನುಭವದಿಂದ ಅಂತಹವನಿಗೆ ಹಕ್ಕುಗಳು ಪ್ರಾಪ್ತವಾಗುತ್ತದೆ.

ದೀರ್ಘಾನುಭವದ ಹಕ್ಕುಗಳು ಕೇವಲ ವಸ್ತುವಿಷಯ ಹಕ್ಕುಗಳಿಗೆ ನಿಯಮಿತವಾಗಿರುವುದಿಲ್ಲ: ಇವು ಋಣಾನುಸಂಭಂದದ ಹಕ್ಕುಗಳು ಅಥವಾ ಸಾಂಪ್ರಾದಾಯಿಕ ಹಕ್ಕುಗಳಿಗೂ ಅನ್ವಯಿಸುತ್ತದೆ. ಖಚಿತ ಅಥವಾ ಸಕ್ರಿಯ ಹಕ್ಕುಗಳು ಕೇವಲ ಸ್ವತ್ತಿನ ಸ್ವಾಧೀನಾನುಭವಕ್ಕೆ ಮಾತ್ರ ಅನ್ವಯಿಸುತ್ತವೆ. ಇಂಥ ಹಕ್ಕಗಳನ್ನು ಸಮಾಜದ ವಿರುದ್ಥ ಪ್ರತಿಪಾದಿಸಬಹುದು. ಆದರೆ ವ್ಯಕ್ತಿಯ ವಿರುದ್ಧ ಪ್ರತಿಪಾದಿತವಾಗುವ ಹಕ್ಕುಗಳು ಅವುಗಳ ಅನುಭವದಿಂದ ಅಥವಾ ಪ್ರಯೋಗದಿಂದ ನಾಶವಾಗುತ್ತವೆ. ಇದಕ್ಕೆ ಕಾರಣ ಇಂಥ ಹಕ್ಕುಗಳು ದೀರ್ಘಾವಧಿ ಅಥವಾ ಪ್ರಾಚೀನಾನುಭವದಿಂದ ವೃದ್ಧಿಯಾಗಲಾರವು. ವ್ಯಕ್ತಿ ಸಂಬಂಧಿ ಹಕ್ಕುಗಳನ್ನೂ ಕಾಲಪರಿಮಿತಿಗೆ ಹೊಂದಿಸಿರುವುದರಿಂದ ಆ ಅವಧಿಯ ಅನಂತರ ನಾಶವಾಗುತ್ತದೆ.

ನಿಷ್ಕ್ರಿಯಾನುಭವ (1) ಪೂರ್ಣ ಮತ್ತು (2) ಅಪೂರ್ಣವೆಂದು ಎರಡು ವಿಧ. ಇದರಲ್ಲಿಯ ಅಪೂರ್ಣ ಹಕ್ಕು ಸಾಮಾನ್ಯವಾಗಿ ಹಕ್ಕು ಪ್ರತಿಪಾದನೆಯ ಕಾಲಾವಧಿಯೆಂದೂ ಪೂರ್ಣ ಹಕ್ಕು ಪ್ರಾಚೀನಾನುಭವ ಅಥವಾ ಸಕ್ರಿಯ ಅನುಭವವೆಂದೂ ಪರಿಗಣಿತವಾಗಿವೆ. ಪೂರ್ಣ ನಿಷ್ಕ್ರಿಯಾನುಭವದಿಂದ ಇರುವ ಹಕ್ಕುಗಳು ನಷ್ಟವಾಗುತ್ತವೆ. ಆದರೆ ಅಪೂರ್ಣ ನಿಷ್ಕ್ರಿಯಾನುಭವದಿಂದ ಇರುವ ಹಕ್ಕುಗಳನ್ನು ಸಾಧಿಸುವ ಪ್ರಾಯೋಗಿಕ ಹಕ್ಕು ಅಥವಾ ಚಿಕಿತ್ಸಕ ಹಕ್ಕು ಮಾತ್ರ ನಷ್ಟವಾಗುತ್ತದೆ. ಆದರೆ ಮೂಲ ಹಕ್ಕು ಸಜೀವವಿರುವುದರಿಂದ ಅದನ್ನು ಬೇರೆ ಮಾರ್ಗಗಳಿಂದ ಉಳಿಸಿಕೊಳ್ಳಲು ಅವಕಾಶವಿದೆ. ಅವಧಿ ಮೀರಿದ ಸಾಲವನ್ನು ವಸೂಲು ಮಾಡಲು ಕಾಯಿದೆಯಿಂದ ಅವಕಾಶವಿಲ್ಲ. ನ್ಯಾಯಾಲಯಗಳು ಈ ಹಕ್ಕುನ್ನು ಮಾನ್ಯ ಮಾಡುವುದಿಲ್ಲ. ಹೀಗಿದ್ದಾಗ್ಯೂ ಅಂಥ ಸಾಲವನ್ನು ಕೊಡುವುದಾಗಿ ಸಾಲಗಾರ ಒಪ್ಪಿಕೊಂಡಲ್ಲಿ ಮೂಲಹಕ್ಕನ್ನು ಸ್ಥಾಪಿಸಲು ಇದ್ದ ಕಾನೂನಿನ ಆತಂಕ ದೂರವಾದಂತಾಗುತ್ತದೆ.

ಕಾಲಾತಿಕ್ರಮಣದಿಂದ ಇರುವ ಹಕ್ಕುಗಳನ್ನು ಪ್ರತಿಪಾದಿಸುವುದಕ್ಕೆ ಆತಂಕವುಂಟು. ಅನಾದಿ ಅಥವಾ ದೀರ್ಘಾನುಭವದಿಂದ ಅಪೂರ್ಣವಾಗಿದ್ದ ಹಕ್ಕು ಪೂರ್ಣತೆ ಪಡೆಯುತ್ತದೆ. ಕಾಲಪರಿಮಿತಿ ಕಾಯಿದೆಯ ಪ್ರಕಾರ ಇನ್ನೊಬ್ಬನ ದೀರ್ಘಾನುಭವದಿಂದ ಅನುಭವಹೀನ ಒಡೆಯನಲ್ಲಿರುವ ಹಕ್ಕುಗಳು ನಾಶವಾಗುವುದಲ್ಲದೆ ಅಂಥ ಹಕ್ಕುಗಳನ್ನು ಅನುಭವದಾರನಿಗೆ ವರ್ಗಾಯಿಸುತ್ತದೆ ಮತ್ತು ಅಂಥ ಅನುಭವದಾರ ಈ ಹಕ್ಕುಗಳನ್ನು ಸಾರ್ವಜನಿಕರ ವಿರುದ್ಧ ಸಹ ಗಳಿಸಿಕೊಳ್ಳುತ್ತಾನೆ. ಇಲ್ಲಿ ಅನುಭವವೆಂದರೆ ಲಾಭಾನುಭವ. ಎಲ್ಲಿ ದೀರ್ಘಾನುಭವದಿಂದ ಅಪೂರ್ಣಹಕ್ಕುಗಳೂ ಪೂರ್ಣತೆಯನ್ನು ಪಡೆಯುತ್ತವೆಯೋ ಅಲ್ಲಿ ಮಾತ್ರ ಒಡೆತನದ ಹಕ್ಕುಗಳು ನಷ್ಟವಾಗುತ್ತವೆ. ಭಾರತದ ಕಾಲಮಿತಿ ಕಾಯಿದೆಯ 28ನೆಯ ಕಲಮಿನ ಪ್ರಕಾರ ಅದರಲ್ಲಿ ನಿರೂಪಿಸಿರುವ ಹಕ್ಕುಗಳನ್ನು ವಿನಾಯಿಸಿ ಉಳಿದ ಯಾವ ಹಕ್ಕುಗಳೂ ದೀರ್ಘಾನುವಧಿಯ ಅನುಭವದಿಂದ ನಷ್ಟವಾಗುವುದಿಲ್ಲ. ಆದರೆ ಕಾಲ ಮಿತಿಯ ಅನಂತರ ಅಂಥ ಹಕ್ಕುಗಳನ್ನು ಪ್ರತಿಪಾದಿಸುವುದಕ್ಕೆ ಮಾತ್ರ ಆತಂಕವುಂಟಾಗುತ್ತದೆ.

ದೀರ್ಘಾನುಭವ ಮೂಲಹಕ್ಕುಗಳ ಅಸ್ತಿತ್ವಕ್ಕೆ ಸಂಬಂಧಪಟ್ಟದ್ದು. ಕಾಲಮಿತಿಯ ಆತಂಕ ಕೇವಲ ವೈಯಕ್ತಿಕ ಹಕ್ಕುಗಳನ್ನು ನ್ಯಾಯಮಂದಿರಗಳಲ್ಲಿ ಸ್ಥಾಪಿಸುವ ಸಲುವಾಗಿ ಮಾಡಿರುವುದರಿಂದ ಇದು ಮೂಲಹಕ್ಕುಗಳು ಸ್ಥಾಪನೆಗೆ ಸಹಾಯಕ. ದೀರ್ಘಾನುಭವ ಸಕ್ರಿಯ; ಕಾಲಾವಧಿ ನಿಷ್ಕ್ರಿಯ.

ಹಿಂದೂ ಕಾಯಿದೆ: ಹಿಂದೂ ಧರ್ಮಶಾಸ್ತ್ರದಲ್ಲಿ ಸಾಲವನ್ನು ವಸೂಲು ಮಾಡಲು ಕಾಲಮಿತಿಯಿರಲಿಲ್ಲ. ಪಿತೃಋಣ ತೀರಿಸುವುದು ಪುತ್ರರ ಧಾರ್ಮಿಕ ಕರ್ತವ್ಯವೆಂದು ಪರಿಗಣಿಸಲಾಗಿತ್ತು. ಹಿಂದೂ ಧರ್ಮಶಾಸ್ತ್ರಜ್ಞರು ಪರರ ಆಸ್ತಿಯನ್ನು ಅನಧಿಕಾರದಿಂದ ಅಥವಾ ವಿನಾ ಹಕ್ಕಿನಿಂದ ಅಪಹರಿಸುವುದನ್ನು ವಿರೋಧಿಸಿದರು. ಆದರೆ ಕಾಲಾನುಕ್ರಮದಲ್ಲಿ ಅವಿರತ ದೀರ್ಘಾನುಭವದಿಂದ ಸ್ಥಾವರ ಆಸ್ತಿಯ ಸಂಬಂಧಿ ಹಕ್ಕುಗಳನ್ನು ಗಳಿಸಿಕೊಳ್ಳಲು ಹಿಂದೂ ಸಮಾಜ ಅನುಕೂಲ ಮನೋಭಾವ ತಳೆದಂತೆ ವ್ಯಕ್ತವಾಗುತ್ತದೆ. ಮನು, ಯಾಜ್ಞವಲ್ಕ್ಯ, ಗೌತಮ, ವಸಿಷ್ಠ, ನಾರದ ಮೊದಲಾದ ಧರ್ಮಶಾಸ್ತ್ರಜ್ಞರು ಸ್ಥಾವರ ಆಸ್ತಿಯ ಸಂಬಂಧದಲ್ಲಿ 20 ವರ್ಷ ಹಾಗೂ ಚರ ಆಸ್ತಿಯ ಸಂಬಂಧಿ 10 ವರ್ಷಗಳ ಕಾಲಮಿತಿಯನ್ನು ನಿರೂಪಿಸಿದಂತೆ ಕಂಡುಬರುತ್ತದೆ.

ರೋಮನರ ಕಾಯಿದೆ: ರೋಮನರ ಕಾಯಿದೆ ಹಿಂದಿನಿಂದಲೂ ಕಾಲಮಿತಿಯ ಆತಂಕ ಹಾಗೂ ದೀರ್ಘಾನುಭವದ ಹಕ್ಕುಗಳನ್ನು ಮಾನ್ಯ ಮಾಡಿದ್ದುದು ಕಂಡುಬರುತ್ತದೆ. 25ನೆಯ ಥಿಯೊಡೋಸಿಯಸ್ ಸಮ್ರಾಟ ಕ್ರಿ.ಶ. 142ರಲ್ಲಿ ಕಾಲಮಿತಿ ಕಾಯಿದೆಯನ್ನು ಜಾರಿಗೆ ತಂದದ್ದು ಕಂಡುಬರುತ್ತದೆ.

ಇಂಗ್ಲಿಷ್ ಕಾಯಿದೆ: ಇಂಗ್ಲೆಂಡಿನ ಸಂಪ್ರದಾಯ ನ್ಯಾಯದ (ಕಾಮನ್ ಲಾ) ಪ್ರಕಾರ ಎಲ್ಲ ವ್ಯವಹಾರಗಳಿಗೂ ಕಾಲಪರಿಮಿತಿಯ ಆತಂಕವಿದ್ದುದು ಕಂಡು ಬರುತ್ತದೆ. 1834ಕಕ್ಕೆ ಪೂರ್ವದಿಂದಲೂ ಅವಧಿ ಮೀರಿದ ಹಕ್ಕುಗಳನ್ನು ಪ್ರತಿಪಾದನೆಯನ್ನು ನಿರಾಕರಿಸಲಾಗಿತ್ತು. ದೀರ್ಘಾನುಭವದಿಂದ ಹಕ್ಕುಗಳು ಪ್ರಾಪ್ತವಾಗುವುವೆಂಬ ತತ್ತ್ವವನ್ನು ಅನುಮೋದಿಸಲಾಗಿದೆ.

ಭಾರತದ ಕಾಲಮಿತಿ ಕಾಯಿದೆ: ಭಾರತದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಛಿದ್ರವಾಗಿದ್ದ ಕಾನೂನುಗಳನ್ನು ಕೋಡೀಕರಿಸಿ ಏಕರೂಪತೆಯ ಕಾಯಿದೆಯೊಂದನ್ನು ರಚಿಸಲು 1841ರಲ್ಲಿ ಕಾಲಮಿತಿ ವಿಧೇಯಕದ ಕರಡನ್ನು ಸಿದ್ಧಗೊಳಿಸಲಾಯಿತು. ಅದು 1859ರಲ್ಲಿ ಕಾಯಿದೆಯಾಯಿತು. 1871ರಲ್ಲಿ ಅದು ರದ್ದಾಗಿ ಹೊಸ ಕಾಯಿದೆಯನ್ನು ಜಾರಿಗೆ ತರಲಾಯಿತು. 1877ರಲ್ಲಿ ಇದಕ್ಕೆ ತಿದ್ದುಪಡಿಯಾಯಿತು. ಅನಂತರ 1908ರಲ್ಲಿ ಸರ್ಕಾರ ಈ ಕಾಯಿದೆಯನ್ನು ರದ್ದುಪಡಿಸಿ ಹೊಸ ಕಾಯಿದೆಯನ್ನು ಜಾರಿಗೆ ತಂದಿತು. ಇದು ಅನಂತರ 30ಕ್ಕಿಂತ ಹೆಚ್ಚು ತಿದ್ದುಪಡಿಗಳಿಗೆ ಒಳಗಾಗಿ ಈಗ ಜಾರಿಯಲ್ಲಿದೆ.

ಕಾಲಾತೀತವಾಗಿ ನಷ್ಟವಾಗಿರುವ ಹಕ್ಕುಗಳನ್ನು ಸ್ಥಾಪಿಸುವುದಕ್ಕೆ ಆತಂಕ, ಈ ಯೋಗದಿಂದ ಸ್ವಾಧೀನದಾರನಿಗೆ ಪ್ರಾಪ್ತವಾಗಿರುವ ಹಕ್ಕುಗಳಿಗೆ ಮಾನ್ಯತೆನೀಡಿ ಅದನ್ನು ಊರ್ಜಿತಗೊಳಿಸಿ ಸಮಾಜದಲ್ಲಿ ಶಾಂತಿ ಮತ್ತು ನಿಶ್ಚಿತಭಾವವನ್ನುಂಟುಮಾಡುವುದು ಮತ್ತು ಕಾಲತೀತ ಬೇಡಿಕೆಗಳನ್ನು ನಷ್ಟಗೊಳಿಸುವುದು-ಇವು ಈ ಕಾಯಿದೆಯ ಮುಖ್ಯ ಧ್ಯೇಯಗಳು. ಆದ್ದರಿಂದ ಇದನ್ನು ಶಾಂತಿ ಸಮಾಧಾನದ ಘಟನಾತ್ಮಕ ಕಾಯಿದೆಯೆಂದು ಪರಿಗಣಿಸಲಾಗಿದೆ.

ಬಹಳ ಕಾಲದ ಮೇಲೆ ಹಕ್ಕುಗಳನ್ನು ಸ್ಥಾಪಿಸಲು ಅವಶ್ಯವಾದ ಪುರಾವೆ ನಾಶವಾಗಿರುವ ಸಂಭವವಿರುವುದರಿಂದ ಅಂಥ ಹಕ್ಕುಗಳನ್ನು ಸ್ಥಾಪಿಸುವುದಕ್ಕೆ ಅವಕಾಶವಿರಬಾರದೆಂಬುದು ಎಲ್ಲ ಕಾಲಮಿತಿ ಕಾಯಿದೆಗಳ ಧೋರಣೆಯಾಗಿದೆ. ಯಾವ ಹಕ್ಕುಗಳನ್ನು ನಿಯಮಿತ ಕಾಲದಲ್ಲಿ ಸ್ಥಾಪಿಸುವುದಿಲ್ಲವೋ ಅಂಥ ಹಕ್ಕುಗಳನ್ನು ನಿರಾಕರಿಸಬೇಕಾದ್ದು ನ್ಯಾಯಸಮ್ಮತ. ಹೀಗಾಗದಿದ್ದಲ್ಲಿ ಕಾಲಾತೀತ ಹಕ್ಕುಗಳನ್ನು ಅಥವಾ ಸುಳ್ಳು ಹಕ್ಕುಗಳನ್ನು ಮೋಸಗಾರರು ಸ್ಥಾಪಿಸಿಕೊಳ್ಳುವುದಕ್ಕೆ ಅವಕಾಶ ಕೊಟ್ಟಂತಾಗಿ ಅಂಥ ಹಕ್ಕುಗಳನ್ನು ಅವ್ಯಾಹತವಾಗಿ ದೀರ್ಘಕಾಲದಿಂದ ಅನುಭವಿಸುತ್ತಿರುವವರಿಗೆ ಅಡಚಣೆ ಮತ್ತು ಅನಿಶ್ಚಿತ ಪರಿಸ್ಥಿತಿಯನ್ನುಂಟುಮಾಡಿದಂತಾಗುತ್ತದೆ. ಈ ಹಕ್ಕುಗಳ ಸಂಬಂಧವಾಗಿ ಸಾಕ್ಷಿಗಳ ಅಭಾವವಿರುವುದರಿಂದಲೂ ಇತರ ಪುರಾವೆ ನಾಶವಾಗಿರುವ ಸಂಭವವಿರುವುದರಿಂದಲೂ ಸಾಕಷ್ಟು ಪುರಾವೆಯನ್ನು ಒದಗಿಸುವುದು ಅಸಾಧ್ಯ ಅಥವಾ ಅಸಂಭವವಾಗುತ್ತದೆ. ಕಾಲಮಿತಿ ಕಾಯಿದೆ ಸಮಾಜದ ಹಿತದ ಸಲುವಾಗಿ ಇರುವುದರಿಂದ ಯಾವ ಮನುಷ್ಯ ತನ್ನ ಹಕ್ಕುಗಳ ವಿಷಯದಲ್ಲಿ ಅಜಾಗರೂಕನಾಗಿರುತ್ತಾನೆಯೋ ಅಂಥ ಮನುಷ್ಯನಿಗೆ ಕಾಯಿದೆಯ ಸಹಾಯ ಪಡೆಯುವ ಹಕ್ಕು ಇರುವುದಿಲ್ಲ. ಯಾವ ಮನುಷ್ಯ ಜಾಗೃತನಾಗಿರುತ್ತಾನೋ, ಸಕಾಲದಲ್ಲಿ ತಕ್ಕ ಹಕ್ಕುಗಳನ್ನು ಪ್ರತಿಪಾದಿಸುತ್ತಾನೋ ಅಂಥವನಿಗೆ ಮಾತ್ರ ಕಾಲಮಿತಿ ಕಾಯಿದೆ ಸಹಾಯಕವಾಗುತ್ತದೆ. ಕಾಯಿದೆಯ ಈ ಧೋರಣೆ ನ್ಯಾಯದೃಷ್ಟಿಯಿಂದ ಮತ್ತು ಸಮಾಜದ ಹಿತ ಮತ್ತು ಅಭ್ಯುದಯದ ದೃಷ್ಟಿಯಿಂದ ಸೂಕ್ತವಾಗಿದೆ.

ಪ್ರಾಚೀನಾನುಭವ ಅಥವಾ ಸಾಂಪ್ರದಾಯಿಕ ಹಕ್ಕುಗಳ ರಕ್ಷಣೆ ಸಮಾಜದ ಹಿತ ದೃಷ್ಡಿಯಿಂದ ಮಹತ್ತ್ವದ ವಿಷಯ. ಕಾಲಮಿತಿ ಕಾಯಿದೆಯಿಂದ ಕಾಲಮಿತಿಯನ್ನು ನಿರ್ಣಯಿಸುವುದರಿಂದ ಎಲ್ಲ ಹಕ್ಕುಗಳೂ ಕಾಲಮಿತಿಗೆ ಒಳಪಟ್ಟು ಅವನ್ನು ಶಾಂತವಾಗಿ ಮತ್ತು ಸುಗಮವಾಗಿ ಅನುಭವಿಸಲು ಅವಕಾಶ ಉಂಟಾಗುತ್ತದೆ. ಇದರಿಂದ ಸಮಾಜದಲ್ಲಿ ಶಾಂತಿ ಸಮಾಧಾನಗಳೂ ವೈಯಕ್ತಿಕವಾಗಿ ನಿಶ್ಚಿತ ಪರಿಸ್ಥಿತಿಯೂ ಉಂಟಾಗುತ್ತದೆ. ಇದರಿಂದ ಕಾರ್ಯತತ್ಪರತೆಗೆ ಪುರಸ್ಕಾರವೂ ಸೋಮಾರಿತನ, ಅಜಾಗ್ರತೆ ಅಥವಾ ಆಲಸಿಕೆಗೆ ದಂಡನೆ ಅಥವಾ ನಷ್ಟವೂ ಆದಂತಾಗುತ್ತದೆ.

ಕಾಲಮಿತಿಯ ಕಾನೂನು ಹಕ್ಕುಗಳನ್ನು ನಿರ್ಮಾಣ ಮಾಡುವುದಿಲ್ಲ; ಇದು ಕೇವಲ ಪರಿಹಾರ ಅಥವಾ ಚಿಕಿತ್ಸೆಯನ್ನು ಪ್ರತಿಬಂಧಿಸುತ್ತದೆ. ಕಾಲಮಿತಿಯಿಂದ ನ್ಯಾಯಾಲಯದಲ್ಲಿ ಪರಿಹಾರ ಮಾರ್ಗ ನಷ್ಟವಾಗುತ್ತದೆ. ಚಿಕಿತ್ಸೆಯ ಪ್ರತಿಬಂಧದಿಂದ ಮೂಲ ಹಕ್ಕುಗಳು ನಾಶವಾಗುವುದಿಲ್ಲ. ಮತ್ತು ಅದನ್ನು ಇತರ ಮಾರ್ಗಗಳಿಂದ ಸಮರ್ಥಿಸಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಪ್ರತಿಪಾದಿಸುವ ಹಕ್ಕುಗಳು ಜೀವಂತವಿದ್ದಲ್ಲಿ ಮಾತ್ರ ಪ್ರತಿಪಾದನೆಗೆ ಸಹಾಯಕವಾಗುವ ಹಕ್ಕುಗಳ ಆವಶ್ಯಕತೆಯಿರುತ್ತದೆ. ಈ ತತ್ತ್ವದ ಪ್ರಕಾರ ಕಾಲಮಿತಿಯೊಳಗಾಗಿ ಹಕ್ಕುಗಳನ್ನು ಸಮರ್ಥಿಸಬೇಕೆಂಬ ನಿಯಮವಿರುವುದಿಲ್ಲ. ಆದರೆ ಕಾಲಮಿತಿ ಮೀರಿದ ಅನಂತರ ಅಂಥ ಹಕ್ಕುಗಳನ್ನು ಸಮರ್ಥಿಸುವುದಕ್ಕೆ ಆತಂಕವಿರುತ್ತದೆ. ಆದರೆ ಮೂಲಹಕ್ಕುಗಳು ನಾಶವಾಗುವುದಿಲ್ಲ. ಸಾಲವನ್ನು ವಸೂಲು ಮಾಡುವ ಹಕ್ಕು ಕಾಲಮಿತಿ ಕಾಯಿದೆಯ ಪ್ರಕಾರ ಅವಧಿ ಮೀರಿದ್ದಾಗಿರುವುದಾದರೂ ಆಸ್ತಿಯ ಆಧಾರ ಅಥವಾ ಅಡಮಾನದ ಮೇಲಿಂದ ಆ ಸಾಲವನ್ನು ವಸೂಲು ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಇದೇ ರೀತಿ ಕಾಲಮಿತಿಯಿಂದ ಬಾಹಿರವಾದ ಸಾಲದ ಹಣವನ್ನು ಸಾಲಗಾರ ಪಾವತಿ ಮಾಡಿದಲ್ಲಿ ಅದರ ಅನಂತರ ಆ ಸಾಲ ಕಾಲಮಿತಿಬಾಹಿರವಾಗಿದೆಯೆಂಬ ಕಾರಣದಿಂದ ಪರತ ಪಡೆಯಲು ಅವಕಾಶವಿರುವುದಿಲ್ಲ. ಈ ತತ್ತ್ವದ ಪ್ರಕಾರ ವಸೂಲು ಮಾಡುವ ಹಕ್ಕು ಮಾತ್ರ ನಷ್ಟವಾಗಿರುತ್ತದೆ. ಇದನ್ನೆ ವಿಮೋಚನಾ ಹಕ್ಕು ಅಥವಾ ಮುಕ್ತ ಮಾಡುವ ಹಕ್ಕು ಎಂದು ಕರೆಯಲಾಗಿದೆ. ಕಾಲಮಿತಿ ಕಾಯಿದೆ ವಾದಿ ಪರಿಹಾರ ಪಡೆಯುವುದಕ್ಕೆ ಅಥವಾ ಚಿಕಿತ್ಸೆಯ ಹಕ್ಕಿಗೆ ಅನ್ವಯಿಸುತ್ತದೆ. ಆದರೆ ವಾದಿ ಬೇಡುವ ಪರಿಹಾರದ ವಿರುದ್ಧ ತನ್ನ ಹಕ್ಕುಗಳು ರಕ್ಷಣೆಗಾಗಿ ಪ್ರತಿವಾದಿ ಆಧರಿಸುವ ಹಕ್ಕುಗಳಿಗೆ ಅನ್ವಯಿಸುವುದಿಲ್ಲ. ಜೀವಂತವಿರುವ ಹಕ್ಕುಗಳನ್ನು ವಾದಿಯಾಗಿ ಪ್ರತಿಪಾದಿಸುವುದಕ್ಕೆ ನಿಯಮಿತ ಕಾಲಾನಂತರ ಆತಂಕವಿದ್ದಾಗ್ಯೂ ಅದಕ್ಕೆ ಉತ್ತರರೂಪವಾಗಿ ಪ್ರತಿವಾದಿ ಆಧರಿಸುವ ಹಕ್ಕುಗಳ ಪ್ರತಿಪಾದನೆಗೆ ಕಾಲಮಿತಿ ಕಾಯಿದೆಯ ಆತಂಕವಿರುವುದಿಲ್ಲ. ಮುದ್ದತಿ ಕಾಯಿದೆ ಮೂಲ ಹಕ್ಕುಗಳು ಅಸ್ತಿತ್ವಕ್ಕೆ ಸಂಬಂಧಿಸಿದ್ದಲ್ಲ, ಇದು ಕೇವಲ ಇರುವ ಹಕ್ಕುಗಳನ್ನು ಸ್ಥಾಪಿಸಿ ಕೊಳ್ಳುವ ಸಹಾಯಕ ವ್ಯವಹಾರಕ್ಕೆ ಸಂಬಂಧಿಸಿದೆ. ಆದ್ದರಿಂದ ಯಾವ ನ್ಯಾಯಾಲಯದಲ್ಲಿ ವ್ಯವಹಾರ ನಡೆಸಲಾಗುತ್ತದೆಯೋ ಅದೇ ನ್ಯಾಯಾಲಯದಲ್ಲಿ ದಾವ ಮಾಡುವ ಕಾಲದಲ್ಲಿ ಅಥವಾ ಹಕ್ಕುಗಳನ್ನು ಪ್ರತಿಪಾದಿಸುವ ಕಾಲದಲ್ಲಿ ಜಾರಿಯಲ್ಲಿರುವ ಕಾಯಿದೆಯನ್ನೇ ಅವಲಂಬಿಸುತ್ತದೆ. ಮುದ್ದತಿ ಕಾಯಿದೆಯನ್ನು ಅಸ್ತಿತ್ವದ್ದೆಂದೂ ಮತ್ತು ಪರಿಹಾರಕ ಅಥವಾ ಚಿಕಿತ್ಸಕ ಎಂದೂ ಎರಡು ರೀತಿಯಲ್ಲಿ ಪರಿಗಣಿಸಲಾಗಿದೆ. ಇದು ಮೂಲ ಹಕ್ಕುಗಳ ಇರುವಿಕೆಗೆ ಅಥವಾ ವಿನಾಶಕ್ಕೆ ಸಂಬಂಧಪಟ್ಟಮಟ್ಟಿಗೆ ಅಸ್ತಿತ್ವದ್ದೆಂತಲೂ ಪರಿಹಾರಕ್ಕೆ ಸಂಬಂಧಪಟ್ಟಮಟ್ಟಿಗೆ ಚಿಕಿತ್ಸಕವೆಂತಲೂ ಪರಿಗಣಿಸಲಾಗಿದೆ. ಕಾಲಮಿತಿ ಕಾಯಿದೆಯ ತಕರಾರು ಅನೀತಿಪರವಾದ್ದು ಅಥವಾ ಅವಮರ್ಯಾದೆಯ ತಕರಾರೆಂದು ಹೇಳಲಾಗುವುದಿಲ್ಲ. ಇಂಥ ತಕರಾರು ನ್ಯಾಯಸಮ್ಮತವಾದ್ದೆಂದೂ ಇದರ ಲಾಭವನ್ನು ಪಡೆಯುವ ಅವಕಾಶ ಧಾರ್ಮಿಕವಾದ್ದೆಂದೂ ಪರಿಗಣಿಸಲಾಗಿದೆ. ಮುದ್ದತಿ ತಕರಾರನ್ನು ಕೇವಲ ತಾಂತ್ರಿಕ ಅಥವಾ ಲಾಕ್ಷಣಿಕ ತಕರಾರೆಂದು ಪರಿಗಣಿಸಲಾಗದು. ಈ ತಕರಾರು ನ್ಯಾಯದೃಷ್ಟಿಯಿಂದ ಅವಶ್ಯವಿದ್ದು ಇದರ ಲಾಭ ಪಡೆಯುವುದು ಯೋಗ್ಯ ಮತ್ತು ಧರ್ಮಸಮ್ಮತ. ಇಂಥ ತಕರಾರು ವೈಯಕ್ತಿಕ ನಿಂದಾತ್ಮಕವೂ ಅಲ್ಲ. ನ್ಯಾಯಾಲಯಗಳು ಇಂಥ ತಕರಾರುಗಳು ನೀತಿಪರವಾದವು ಅಥವಾ ಧರ್ಮಶೀಲವಾದವು ಎಂದು ನಿರ್ಣಯಿಸುವ ಕಾರಣವಿಲ್ಲ. ಆದರೆ ಇವು ನ್ಯಾಯದೃಷ್ಟಿಯಿಂದ ಹುಟ್ಟಿದವೇ ಎಂಬುದನ್ನು ಮಾತ್ರ ವಿಚಾರಿಸಬೇಕಾಗುತ್ತದೆ.

ಅಸ್ತಿತ್ವದಲ್ಲಿರುವ ಹಕ್ಕುಗಳ ಅಜ್ಞಾನದಿಂದ ಅಥವಾ ತಪ್ಪು ತಿಳಿವಳಿಕೆಯಿಂದ ಕಾಲಾವಧಿಯ ಪರಿಮಿತಿಯನ್ನು ಹೆಚ್ಚಿಸಲು ಬರುವುದಿಲ್ಲ. ವ್ಯಾಜ್ಯ ಕಾರಣ ಉಂಟಾದ ಅನಂತರ ಕೇವಲ ಅಜ್ಞಾನದಿಂದ ಕಾಯಿದೆಯ ಪ್ರಕಾರ ಮುಂದುವರಿಯುವ ಕಾಲಮಿತಿ ನಿಲ್ಲುವುದಿಲ್ಲ. ಕಾಲಮಿತಿಯ ಪ್ರಾರಂಭವನ್ನು ಕಾಯಿದೆಯಿಂದ ನಿರ್ಣಯಿಸಿರುವುದರಿಂದ ಕಾಲಮಿತಿಯ ಪ್ರಾರಂಭವನ್ನು ತಡೆಗಟ್ಟಲು ವ್ಯಕ್ತಿಗಳಿಗೆ ಅಧಿಕಾರವಿಲ್ಲ. ಹಕ್ಕುಗಳನ್ನು ಪ್ರತಿಪಾದಿಸುವುದಕ್ಕಾಗಿ ಕಾಲಮಿತಿಯನ್ನು ನಿರ್ದೇಶಿಸಿರುವುದರಿಂದ ಆ ಕಾಲಮಿತಿಯನ್ನು ಕಕ್ಷಿಗಳು ತಮ್ಮ ಸಮ್ಮತಿಯಿಂದ ಬದಲಾಯಿಸುವುದಾಗಲಿ ಕಡೆಗಣಿಸುವುದಾಗಲಿ ಸಾಧ್ಯವಿಲ್ಲ. ವ್ಯಕ್ತಿಗಳಾಗಲಿ ನ್ಯಾಯಸ್ಥಾನಗಳಾಗಲಿ ಕಾಲಮಿತಿ ಕಾಯಿದೆಯನ್ನು ನಿರಾಕರಿಸಲಿಕ್ಕಾಗಲಿ ಅತಿಕ್ರಮಿಸುವುದಕ್ಕಾಗಲಿ ಸಾಧ್ಯವಿಲ್ಲ. ಕಾಲಮಿತಿ ಕಾಯಿದೆ ಶ್ರೀಮಂತ, ಬಡವ, ಶಕ್ತಿವಂತ, ಶಕ್ತಿಹೀನ, ಜಾಣ, ದಡ್ಡ ಎಂದು ಭೇದ ಭಾವ ಮಾಡುವುದಿಲ್ಲ. ಅನಾರೋಗ್ಯ ಮುಂತಾದ ಕಾರಣಗಳಿಂದ ಹಕ್ಕುಗಳನ್ನು ಪ್ರತಿಪಾದಿಸಲಾಗಲಿಲ್ಲವೆಂಬ ವಾದದಿಂದ ಕಾಯಿದೆಯ ನಿಯಮಗಳನ್ನು ಕಡೆಗಣಿಸಲಾಗದು. ಶಾಸನಾಂಕಿತವಾದ ಕಾಲಾವಧಿಯನ್ನು ಅಥವಾ ಕಾಲಾವಧಿ ಪ್ರಾರಂಭವಾಗುವುದನ್ನು ಪಕ್ಷಕಾರರ ಸಮ್ಮತಿಯಿಂದ ಬದಲು ಮಾಡಲು ಅಥವಾ ಹೆಚ್ಚಿಸಲು ಬರುವುದಿಲ್ಲ. ಆದರೆ ಮೋಸದಿಂದ ಅಥವಾ ವಂಚನೆಯಿಂದ ಹಕ್ಕುಗಳ ಪ್ರತಿಪಾದನೆಗೆ ಅಡಚಣೆ ಉಂಟಾಗಿದ್ದಲ್ಲಿ ಕಾಲಾತೀತ ಆತಂಕದ ಬಾಧೆಯನ್ನು ತಪ್ಪಿಸಲು ಅವಕಾಶವಿದೆ.

ವಿರುದ್ಧ ಕಬ್ಜಾ ಅಥವಾ ಪ್ರತಿಕೂಲಾನುಭವ : ಅನಧಿಕಾರದಿಂದ ಒಡೆತನದ ಹಕ್ಕಿನ ವಿರುದ್ಧವಾಗಿ ಬಹಿರಂಗವಾಗಿ ಒಡೆತನ ಹಕ್ಕುಗಳನ್ನು ಅಲ್ಲಗಳೆದು ಅವನಿಗೆ ತಿಳಿಯುವಂತೆ ಮಾಲ್ಕಿ ಹಕ್ಕುಗಳನ್ನು ಪ್ರತಿಪಾದಿಸುತ್ತ ಆಸ್ತಿಯನ್ನು ಅನುಭವಿಸಿದರೆ ನಿಯಮಿತ ಕಾಲಾನಂತರ ಒಡೆಯನ ಹಕ್ಕುಗಳನ್ನು ಪ್ರತಿಪಾದಿಸುವ ಚಿಕಿತ್ಸೆಗೆ ಆತಂಕವುಂಟಾಗುವುದರಿಂದ, ಅನುಭವಿಸುವವನ ಹಕ್ಕುಗಳನ್ನು ಪಕ್ವವಾಗುತ್ತವೆ. ಯಾವುದೇ ಆಸ್ತಿಯ ಮಾಲೀಕ ತನ್ನ ಆಸ್ತಿಯ ಸಂಬಂಧವಾಗಿ ವಿರುದ್ಧ ಕಬ್ಜಾದಿಂದ ಹಕ್ಕುಗಳನ್ನು ಹೇಳಲಿಕ್ಕೆ ಅವಕಾಶವಿಲ್ಲ. ವಿರುದ್ಧ ಕಬ್ಜಾದ ಹಕ್ಕು ಒಡೆತನದ ಹಕ್ಕಿಗೆ ವಿರುದ್ಧವಾಗಿದ್ದು ಒಡೆತನದ ಹಕ್ಕು ಅಸ್ತಿತ್ವದಲ್ಲಿರುವವರೆಗೂ ಅವನಿಗೆ ವಿರುದ್ಧ ಕಬ್ಜಾದಿಂದ ಅದೇ ಆಸ್ತಿಯ ಸಂಬಂಧದ ಹಕ್ಕುಗಳು ಪ್ರಾಪ್ತವಾಗಲಾರವು. ಒಡೆಯನ ಹಕ್ಕುಗಳಿಗೆ ಒಳಪಡಿಸಿ ಅಥವಾ ಅವನ ಸಮ್ಮತಿಯಿಂದ ಎಷ್ಟು ಕಾಲ ಅನುಭವಿಸಿದಾಗ್ಯೂ ಅಂಥ ಅನುಭವ ಪ್ರತಿಕೂಲಾನುಭವವೆನಿಸುವುದಿಲ್ಲ; ಮತ್ತು ಮಾಲೀಕನ ಹಕ್ಕುಗಳು ನಷ್ಟವಾಗುವುದಿಲ್ಲ.

ವಿರುದ್ಧ ಕಬ್ಜಾದ ಹಕ್ಕುಗಳು ಆಸ್ತಿಯ ಅನಧಿಕಾರದ ಅನುಭವದಿಂದ ಮಾತ್ರ ಪ್ರಾಪ್ತವಾಗುವುದರಿಂದ, ಆಸ್ತಿಯ ಪ್ರತ್ಯಕ್ಷ ಕಬ್ಜಾ ಅಥವಾ ಅನುಭವ ಇಲ್ಲದಿದ್ದಲ್ಲಿ ಈ ಹಕ್ಕು ಪ್ರಾಪ್ತವಾಗಲಾರದು. ಅನಧಿಕಾರದಿಂದ ಅಥವಾ ಗೈರ್‍ಹಕ್ಕಿನಿಂದ ಆಸ್ತಿಯ ಕಬ್ಜಾ ಪಡೆದ ವೇಳೆಯಿಂದ ಮೂಲ ಮಾಲೀಕ ಹಕ್ಕುಗಳನ್ನು ಕಡೆಗಣಿಸಿದ್ದು ಅನಧಿಕಾರದಿಂದ ಮಾಲ್ಕಿ ಹಕ್ಕುಗಳನ್ನು ಚಲಾಯಿಸುತ್ತಿರುವುದರಿಂದ ವಿರುದ್ಧ ಕಬ್ಜಾದ ಹಕ್ಕು ಪ್ರಾರಂಭವಾಗುತ್ತದೆ. ಇಂಥ ಅನಧಿಕಾರದ ಹಕ್ಕು ನಿರ್ಣಾಯಿಕ ಕಾಲಮಿತಿಯ ವರೆಗೆ ಅವ್ಯಾಹತವಾಗಿ ಅನುಭವಿಸಿದಲ್ಲಿ ಅಂಥ ಹಕ್ಕು ಪಕ್ವವಾಗಿ ಒಡೆತನದ ಹಕ್ಕು ಪ್ರಾಪ್ತವಾದಂತೆ ಆಗುತ್ತದೆ. ವಿರುದ್ಧ ಕಬ್ಜಾದಿಂದ ಒಡೆತನದ ಹಕ್ಕುಗಳು ಪ್ರಾಪ್ತವಾಗಬೇಕಾದರೆ ಮುದ್ದತಿಕಾಯಿದೆಯ ಕಾಲಪರಿಮಿತಿ ಮೀರುವವರೆಗೆ ಅವ್ಯಾಹತವಾಗಿ ಅನಧಿಕಾರದಿಂದ ಆಸ್ತಿಯನ್ನು ಅನುಭವಿಸಬೇಕು. ಈ ಅನುಭವ ವ್ಯಕ್ತ ರೀತಿಯಲ್ಲಿ ಅದರ ಮಾಲೀಕನ ಹಕ್ಕುಗಳನ್ನು ಅವನಿಗೆ ತಿಳಿಯುವಂತೆ ಅಲ್ಲಗಳೆದಂತೆ ಇರಬೇಕು. ಮತ್ತು ಆಸ್ತಿಯ ಕಬ್ಜಾ ಅಥವಾ ಅನುಭವ ಕಾಲಮಿತಿಯೊಳಗಾಗಿ ಕೊನೆಗೊಳ್ಳಬಾರದು. ಅನಧಿಕಾರದಿಂದ ಕಬ್ಜಾದಲ್ಲಿರುವವನ ಹಕ್ಕುಗಳು ಕೇವಲ ಕಬ್ಜಾದ ಪರಿಸ್ಥಿತಿಯಿಂದ ಪ್ರಾಪ್ತವಾಗಿದ್ದು ಅದು ಕಾಲಮಿತಿ ಕಾಯಿದೆ ಪ್ರಕಾರ ಪಕ್ವವಾಗುವುದರ ಒಳಗಾಗಿ ಅವನ ಕಬ್ಜಾ ತಪ್ಪಿದಲ್ಲಿ ಅಲ್ಲಿಯವರೆಗಿದ್ದ ಕಬ್ಜಾದ ಹಕ್ಕುಗಳು ನಷ್ಟವಾಗಿ ಪ್ರತಿಬಂಧಿತವಾಗಿದ್ದ ಒಡೆತನದ ಹಕ್ಕುಗಳು ಮುಕ್ತವಾಗುತ್ತವೆ. ಇದರಿಂದ ಮಾಲೀಕನ ಹಕ್ಕುಗಳು ಪುನಃ ಸ್ಥಾಪಿತವಾದಂತಾಗುತ್ತದೆ. ವಿರುದ್ಧ ಕಬ್ಜಾದಿಂದ ಹಕ್ಕು ಹೇಳುವವನು ಕಾಲಮಿತಿಯಲ್ಲಿ ಕಬ್ಜಾ ಕಳೆದುಕೊಳ್ಳುವುದರಿಂದ ಅಪೂರ್ಣವಾಗಿದ್ದ ಹಕ್ಕು ನಷ್ಟವಾಗುತ್ತದೆ.

ವಿರುದ್ದ ಕಬ್ಜಾ ಅಥವಾ ಅನುಭವ ಎರಡು ಕಾರಣಗಳಿಂದ ಉಂಟಾಗುತ್ತದೆ : 1 ಪ್ರತ್ಯಕ್ಷ ಕಬ್ಜಾ ಅಥವಾ ಅನುಭವ, 2 ಮನೋನಿಶ್ಚಯ. ಅನಧಿಕಾರದಿಂದ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡರೆ ಆ ಆಸ್ತಿಯನ್ನು ತನ್ನ ಒಡೆತನದ ಹಕ್ಕಿನಿಂದ ಇಲ್ಲವೆ ಮೂಲ ಒಡೆಯನ ವಿರುದ್ಧ ತನ್ನ ಹಕ್ಕನ್ನು ಸ್ಥಾಪಿಸಿಕೊಳ್ಳುವ ಮನೋಧೋರಣೆಯಿಲ್ಲದಿದ್ದಲ್ಲಿ ಅಂಥ ಕಬ್ಜಾದಿಂದ ವಿರುದ್ಧ ಕಬ್ಜಾದ ಹಕ್ಕುಗಳು ಪ್ರಾಪ್ತವಾಗಲಾರವು. ಬೇರೆಯವರ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಾಗ ಅದನ್ನು ಅದರ ಮಾಲೀಕನ ವಿರುದ್ಧ ತನ್ನ ಹಕ್ಕುಗಳನ್ನು ಸ್ಥಾಪಿಸಿಕೊಳ್ಳವ ಉದ್ದೇಶದಿಂದ ಮಾಡಿದ್ದರೆ ಮಾತ್ರ ವಿರುದ್ಧ ಕಬ್ಜಾದ ಹಕ್ಕು ಪ್ರಾಪ್ತವಾಗುತ್ತದೆ. ಒಂದು ಮನೆಯ ಮಾಲೀಕನ ಆಳುಗಳು ಅಥವಾ ಇತರರು ಆ ಮನೆಯ ಪ್ರತ್ಯಕ್ಷ ಅನುಭವದಲ್ಲಿರುವುದು ಸಾಧ್ಯ. ಅವನ ಮನೆ ಒಂದೂರಿನಲ್ಲಿದ್ದು ಆತ ಬೇರೆ ಊರಿನಲ್ಲಿದ್ದಲ್ಲಿ ಅವನ ಆಳುಗಳು ಅಥವಾ ಅವನಿಂದ ಅಧಿಕಾರ ಪಡೆದವರು ಅಥವಾ ಅನುಮತಿ ಪಡೆದವರು ಪ್ರತ್ಯಕ್ಷ ಕಬ್ಜಾದಲ್ಲಿ ಇದ್ದಾಗ್ಯು ಅವರಿಗೆ ಆತನ ವಿರುದ್ಧ ಯಾವ ಹಕ್ಕುಗಳೂ ಪ್ರಾಪ್ತವಾಗಲಾರವು. ಅವರ ಪ್ರತ್ಯಕ್ಷ ಅನುಭವ ಅವನ ಪರೋಕ್ಷ ಅನುಭವವೆಂದು ತಿಳಿಯಲಾಗುವುದು. ಅವನ ಆಳುಗಳು ಅಥವಾ ಅವನ ಅನುಮತಿ ಪಡೆದವರು ಪ್ರತ್ಯಕ್ಷ ಕಬ್ಜಾದಲ್ಲಿದ್ದಾಗ್ಯೂ ಅವರು ಎಲ್ಲಿಯವರೆಗೆ ಅವನ ಹಕ್ಕುಗಳನ್ನು ಕಡೆಗಣಿಸುವುದಿಲ್ಲವೋ ಅಲ್ಲಿಯವರೆಗೆ ಅವರಿಗೆ ಯಾವ ಹಕ್ಕುಗಳೂ ಪ್ರಾಪ್ತವಾಗಲಾರವು. ವಿರುದ್ಧ ಹಕ್ಕುಗಳನ್ನು ಸಾಧಿಸುವ ಮನೋಭಾವವಿಲ್ಲದಿದ್ದಲ್ಲಿ ಪ್ರತ್ಯಕ್ಷ ಅನುಭವದಿಂದ ಏನು ಹಕ್ಕುಗಳು ಪ್ರಾಪ್ತವಾಗಲಾರವು. ಕಬ್ಜಾ ತೆಗೆದುಕೊಳ್ಳುವ ಕಾಲದಲ್ಲಿ ವಿರುದ್ಧ ಮನೋಭಾವವಿರುವ ಕಾರಣವಿಲ್ಲ. ಕಬ್ಜಾ ತೆಗೆದುಕೊಳ್ಳುವ ಕಾಲಕ್ಕೆ ವಿರೋಧ ಮನೋಭಾವವಿಲ್ಲದಿದ್ದಾಗ್ಯೂ ಮುಂದೆ ಆ ಮನೋಭಾವವನ್ನು ಅಳವಡಿಸಿಕೊಂಡರೆ ಆಗ ವಿರುದ್ಧ ಕಬ್ಜಾದ ಹಕ್ಕು ಪ್ರಾಪ್ತವಾಗುತ್ತದೆ. ಒಬ್ಬನ ಜಮೀನನ್ನು ಗುತ್ತಿಗೆ ಕೊಡುವ ಕರಾರಿನಿಂದ ಪ್ರತ್ಯಕ್ಷ ಕಬ್ಜಾದಲ್ಲಿಟ್ಟುಕೊಂಡಲ್ಲಿ ಎಲ್ಲಿಯವರೆಗೆ ಗುತ್ತಿಗೆ ಕೊಡುವ ಕರಾರು ಅಸ್ತಿತ್ವದಲ್ಲಿರುತ್ತದೆಯೇ ಅಲ್ಲಿಯವರೆಗೆ, ಆಮೇಲೆ ಸಹ ಎಲ್ಲಿಯವರೆಗೆ ಗುತ್ತಿಗೆ ಕೊಡಬೇಕೆಂಬ ಮನೋಭಾವ ರೈತನಲ್ಲಿರುತ್ತದೆಯೋ ಅಲ್ಲಿಯವರೆಗೆ, ವಿರುದ್ಧ ಕಬ್ಜಾದ ಹಕ್ಕುಗಳು ಪ್ರಾಪ್ತವಾಗುವುದಿಲ್ಲ. ಆದರೆ ಗುತ್ತಿಗೆಯ ಕರಾರು ತೀರಿದ ಅನಂತರ ರೈತ ತನ್ನ ಮನೋಭಾವವನ್ನು ಬದಲಾಯಿಸಿ ತಾನು ಆ ಆಸ್ತಿಯ ಮಾಲೀಕನಂತೆ ಮೂಲ ಮಾಲೀಕನ ಹಕ್ಕುಗಳನ್ನು ಅಲ್ಲಗಳೆದು ಬಹಿರಂಗವಾಗಿ ಅನುಭವಿಸತೊಡಗಿದರೆ ಆ ಕ್ಷಣದಿಂದ ವಿರುದ್ಧ ಕಬ್ಜಾದ ಹಕ್ಕು ಪ್ರಾರಂಭವಾಗುತ್ತದೆ. ಹೀಗೆ ಪ್ರಾರಂಭವಾದ ಹಕ್ಕನ್ನು ಅವ್ಯಾಹತವಾಗಿ ಬಹಿರಂಗವಾಗಿ ಮಾಲೀಕನಿಗೆ ತಿಳಿಯುವಂತೆ ಕಾಲಮಿತಿಯವರೆಗೆ ಅನುಭವಿಸಿದರೆ ಅಂಥ ಅಪೂರ್ಣವಾಗಿದ್ದ ಹಕ್ಕು ಪೂರ್ಣವಾಗಿ ಪಕ್ವವಾಗುತ್ತದೆ.

ಸಾಧಾರಣವಾಗಿ ಹಕ್ಕಿಲ್ಲದವರು ಬೇರೆಯವರ ಆಸ್ತಿಯನ್ನು ತಾತ್ಕಾಲಿಕ ಉದ್ದೇಶಗಳಿಂದ ಅನುಭವಿಸುವುದು ಕಂಡು ಬರುತ್ತದೆ. ಇಂಥ ಅನುಭವದಿಂದ ಯಾವ ಹಕ್ಕುಗಳೂ ಪ್ರಾಪ್ತವಾಗಲಾರವು. ಅದೇ ಪ್ರಕಾರ ಕೆಲವೊಂದು ತಾತ್ಪೂರ್ತಿಕ ಕೆಲಸಗಳಿಗೆ ಅಥವಾ ಅನುಕೂಲಗಳಿಗೆ ಬೇರೆಯವರ ಆಸ್ತಿಯನ್ನು ಉಪಯೋಗಿಸಿದರೆ ಅಥವಾ ಅನುಭವಿಸಿದರೆ ಇದರಿಂದ ವಿರುದ್ಧ ಕಬ್ಜಾದ ಹಕ್ಕುಗಳು ಪ್ರಾಪ್ತವಾಗಲಾರವು. ಬೇರೆಯವರ ಜಮೀನಿನಲ್ಲಿ ಗೊಬ್ಬರ ಅಥವಾ ತಿಪ್ಪೆ ಹಾಕುವುದು, ಕಟ್ಟಿಗೆಕಲ್ಲು ಅಥವಾ ಹುಲ್ಲು ಇವುಗಳನ್ನು ಒಟ್ಟುವುದು ಅಥವಾ ಗುಡ್ಡೆ ಹಾಕುವುದು, ವಾಹನಗಳನ್ನು ನಿಲ್ಲಿಸುವುದು, ದನಕರುಗಳನ್ನು ಕಟ್ಟುವುದು, ಹಂಗಾಮಿ ಅಥವಾ ತಾತ್ಕಾಲಿಕವಾಗಿ ಬೇಲಿ ಅಥವಾ ಮುಳ್ಳು ಹಾಕುವುದು ಅಥವಾ ಗುಡಿಸಲು, ಚಪ್ಪರ ಹಾಕುವುದು ಇಂಥ ಅನುಭವ ಸಾಧಾರಣವಾಗಿ ಎಲ್ಲ ಕಡೆಯೂ ಕಂಡುಬರುತ್ತದೆ. ಇಂಥ ಅನುಭವ ಅಥವಾ ಉಪಯೋಗವನ್ನು ಕಾಯಿದೆ ದೃಷ್ಟಿಯಿಂದ ಕಬ್ಜಾ ಎಂದು ಪರಿಗಣಿಸಲಾಗುವುದಿಲ್ಲ. ಇಂಥ ಅನುಭವ ಅಥವಾ ಉಪಯೋಗದಿಂದ ಕಬ್ಜಾದ ಹಕ್ಕುಗಳಾಗಲಿ, ವಿರುದ್ಧ ಕಬ್ಜಾದ ಹಕ್ಕುಗಳಾಗಲಿ ಪ್ರಾಪ್ತವಾಗಲಾರವು.

ಯಾವ ರೀತಿಯ ಅನುಭವ ಅಥವಾ ಉಪಯೋಗದಿಂದ ವಿರುದ್ಧ ಕಬ್ಜಾದ ಹಕ್ಕುಗಳು ಪ್ರಾಪ್ತವಾಗುತ್ತವೆಯೆಂದು ಹೇಳಲು ಬರುವಂತಿಲ್ಲ. ವಿರುದ್ಧ ಹಕ್ಕುಗಳನ್ನು ಸ್ಥಾಪಿಸುವುದಕ್ಕೆ ಅಥವಾ ಪ್ರತ್ಯಕ್ಷ ಕಬ್ಜಾದ ಹಕ್ಕುಗಳು ಪ್ರಾಪ್ತವಾಗಿವೆಯೆಂದು ತಿಳಿಯುವುದಕ್ಕೆ ಸಾಧಾರಣವಾಗಿ ಆ ಆಸ್ತಿಯ ಸ್ವರೂಪ ಮತ್ತು ಮನೋಭಾವ ವ್ಯಕ್ತಮಾಡಿರುವ ರೀತಿಯಿಂದ ಮಾತ್ರ ತಿಳಿಯಲು ಸಾಧ್ಯ. ಆಸ್ತಿಯ ಅನುಭವವನ್ನು ಅದರ ಪರಿಸ್ಥಿತಿ, ಸ್ವಭಾವ, ಇರುವ ಸ್ಥಳ ಮತ್ತು ಅದು ಸಾಧಾರಣವಾಗಿ ಉಪಯೋಗವಾಗತಕ್ಕ ಕೆಲಸ ಮತ್ತು ರೀತಿ, ಇವುಗಳಿಂದ ಮಾತ್ರ ತಿಳಿಯಬೇಕು.

ವ್ಯಕ್ತಿಗಳ ವಿರುದ್ಧವಾಗಿಯಲ್ಲದೆ ಸಂಸ್ಥೆಗಳ ಮತ್ತು ಸರಕಾರದ ವಿರುದ್ಧ ಸಹ ಅನುಭವದ ಹಕ್ಕುಗಳನ್ನು ಪ್ರತಿಪಾದಿಸುವುದಕ್ಕೆ ಅವಕಾಶವಿದೆ. ಪ್ರತ್ಯಕ್ಷ ಅನುಭವದಲ್ಲಿರುವವನ ಮಾನಸಿಕ ಭಾವನೆಯಿಂದಲೂ ಆ ಮಾನಸಿಕ ಭಾವನೆ ಕಾರ್ಯಗತವಾದ ರೀತಿಯಿಂದಲೂ ಅದನ್ನು ತಿಳಿಯಬೇಕು. ಕೆಲವು ವೇಳೆ ಅವನ ಮಾನಸಿಕ ಭಾವನೆಗಳ ಸಂಬಂಧವಾಗಿ ನಿರ್ಣಾಯಕ ಉತ್ತರ ಬರುವುದು. ಸಾಧ್ಯವಿಲ್ಲದಿದ್ದಲ್ಲಿ ಅವನು ಯಾವ ರೀತಿ ತನ್ನ ಮಾನಸಿಕ ಧ್ಯೇಯವನ್ನು ಆಸ್ತಿಯ ಅನುಭವದಲ್ಲಿ ಅಳವಡಿಸುತ್ತಾನೆಯೋ ಅದರಿಂದ ನಿರ್ಣಯಿಸಬೇಕಾಗುತ್ತದೆ.

ವಿರುದ್ಧ ಕಬ್ಜಾದ ಹಕ್ಕುಗಳು ಕೇವಲ ಪ್ರತ್ಯಕ್ಷ ಸ್ವಾಧೀನಾನುಭವದಿಂದಲೇ ಪ್ರಾರಂಭವಾಗುತ್ತವೆಯೆಂದು ತಿಳಿಯಬಾರದು. ವಿರುದ್ಧ ಕಬ್ಜಾದ ಹಕ್ಕುಗಳನ್ನು ತಮ್ಮ ಪ್ರತಿನಿಧಿಗಳಿಂದ, ಕಾರ್ಯದರ್ಶಿಗಳಿಂದ, ತಮ್ಮ ಅನುಮತಿಯಿಂದ ಆಸ್ತಿಯನ್ನು ಅನುಭವಿಸುವವರಿಂದ ಸಹ ಗಳಿಸುವುದಕ್ಕೆ ಅವಕಾಶವಿದೆ. ಏಕೆಂದರೆ, ಮಾಲೀಕನ ಅನುಮತಿಯಿಂದ ಸ್ವಾಧೀನಾನುಭವದಲ್ಲಿರುವ ಆಸ್ತಿಯ ಸಂಬಂಧವಾಗಿ ಪ್ರಾಚೀನಾನುಭವದಿಂದಾಗಲೀ ವಿರುದ್ಧ ಕಬ್ಜಾದಿಂದಾಗಲೀ ಮಾಲೀಕನ ವಿರುದ್ಧ ಹಕ್ಕುಗಳು ಪ್ರಾಪ್ತವಾಗಲಾರವು.

ಸಾಧಾರಣವಾಗಿ ಮೂಲ ಮಾಲೀಕನಿಗೆ ಪ್ರತ್ಯಕ್ಷ ಅನುಭವದಾರ ತನಗೆ ವಿರುದ್ಧವಾಗಿ ಹಕ್ಕುಗಳನ್ನು ಪ್ರತಿಪಾದಿಸುತ್ತಿರುವನೆಂಬ ಸಂಗತಿ ತಿಳಿದಿರಬೇಕು. ಹಾಗೆ ತಿಳಿಯದಿದ್ದಲ್ಲಿ ವಿರುದ್ಧ ಕಬ್ಜಾದ ವಹಿವಾಟು ಬಹಿರಂಗವಾಗಿರಬೇಕು. ಈ ರೀತಿ ಬಹಿರಂಗವಾಗಿ ಅನುಭವಿಸಿದರೆ ಮಾಲೀಕನಿಗೆ ಈ ವಿರುದ್ಧ ಹಕ್ಕು ಪ್ರತಿಪಾದನೆ ತಿಳಿದಿದೆಯೆಂದು ಪರಿಗಣಿಸಲಾಗುವುದು. ಇದೇ ರೀತಿ ಮಾಲೀಕನಿಗೆ ತಿಳಿಯದಿದ್ದರೂ ಅವನ ಪ್ರತಿನಿಧಿಗಳಿಗೆ ತಿಳಿದಿದ್ದಲ್ಲಿ ಅಂಥ ತಿಳುವಳಿಕೆ ಮೂಲ ಮಾಲೀಕನಿಗೆ ಇದೆ ಎಂದು ಪರಿಗಣಿಸಲಾಗುವುದು.

 ವಿರುದ್ಧ ಕಬ್ಜಾದ ಹಕ್ಕು ಸ್ವಾಧೀನಾನುಭವದಲ್ಲಿರುವ ಸ್ವತ್ತಿಗೆ ಮಾತ್ರ ಪರಿಮಿತವಾಗಿರುತ್ತದೆ. ಒಂದು ಸ್ವತ್ತಿನ ಸ್ವಾಧೀನಾನುಭವದಿಂದ ಅನುಭವವಿಲ್ಲದ ಅಥವಾ ಕಬ್ಜಾ ಇಲ್ಲದೆ ಬೇರೆ ಆಸ್ತಿಗಳ ಸಂಬಂಧವಾಗಿ ಸಹ ವಿರುದ್ಧ ಕಬ್ಜಾದ ಹಕ್ಕು ಪ್ರಾಪ್ರವಾಗಿದೆಯೆಂದು ತಿಳಿಯಲಾಗದು. ಆದರೆ ಒಂದೇ ಅಖಂಡ ಆಸ್ತಿಯಿದ್ದಲ್ಲಿ ಅದರ ಯಾವುದೇ ಭಾಗ ವಿರುದ್ಧ ಅನುಭವಕ್ಕೆ ಒಳಗಾಗಿದ್ದು ಇತರ ಭಾಗಗಳ ಸಂಬಂಧವಾಗಿ ಮಾಲೀಕ ತನ್ನ ಹಕ್ಕುಗಳನ್ನು ಅನುಭವಿಸದಿದ್ದಲ್ಲಿ ಪೂರ್ಣ ಆಸ್ತಿಯ ಸಂಬಂಧವಾಗಿ ವಿರುದ್ಧ ಅನುಭವದ ಹಕ್ಕು ಪ್ರಾಪ್ತವಾಗಿದೆಯೆಂದು ತಿಳಿಯಬಹುದು.

 ಅಗ್ರಾಹ್ಯವಾದ ಅಥವಾ ಅಯೋಗ್ಯವಾದ ಅಥವಾ ಕಾಯಿದೆಗೆ ವಿರುದ್ಧವಿರುವ ವ್ಯವಹಾರ ಅಥವಾ ಕಾಗದಪತ್ರಗಳಿಂದ ಪ್ರಾಪ್ತವಾದ ಹಕ್ಕುಗಳು ವ್ಯವಹಾರವಾಗುವ ಕಾಲದಲ್ಲೇ ನ್ಯಾಯಬಾಹಿರವಿರುವುದರಿಂದ ಕಾಯಿದೆಯಿಂದ ರಕ್ಷಿತವಾಗುವ ಹಕ್ಕುಗಳು ಉದ್ಭವಿಸುವುದಿಲ್ಲ. ಏಕೆಂದರೆ ಇಂಥ ವ್ಯವಹಾರದ ಪರಿಣಾಮವಾಗಿ ದೊರೆತ ಅನುಭವದಿಂದ ಕೇವಲ ವಿರುದ್ಧಾನುಭವದ ಹಕ್ಕು ಮಾತ್ರ ಪ್ರಾಪ್ತವಾಗುತ್ತದೆ. ಇಂಥ ಅನುಭವವನ್ನು ಅವ್ಯಾಹತವಾಗಿ ಕಾಲಮಿತಿ ಕಳೆಯುವವರೆಗೆ ಅನುಭವಿಸಿದಲ್ಲಿ ವಿರುದ್ಧಾನುಭವದಿಂದ ಪೂರ್ವದ ಮಾಲೀಕನ ಹಕ್ಕುಗಳು ನಷ್ಟವಾಗಿ ಅನುಭವದಾರನಿಗೆ ವಿರುದ್ಧವಾದ ಹಕ್ಕುಗಳು ಪ್ರಾಪ್ತವಾಗುತ್ತವೆ. ನ್ಯಾಯವಾಗಿ ಅಥವಾ ಅನ್ಯಾಯವಾಗಿ ತಾನೇ ಮಾಲೀಕನೆಂಬ ತಪ್ಪು ತಿಳಿವಳಿಕೆಯಿಂದ ಅಥವಾ ಬೇರೊಬ್ಬ ಮಾಲೀಕನೆಂದು ತಿಳಿದೂ ತನ್ನ ಮಾಲೀಕತನದ ಹಕ್ಕನ್ನು ಮಾಲೀಕನ ವಿರುದ್ಧ ಸ್ಥಾಪಿಸುವ ಉದ್ದೇಶದಿಂದ, ತಾನೇ ಮಾಲೀಕನೆಂದು ಪ್ರತಿಪಾದಿಸಿದರೆ ಅವನಿಗೆ ವಿರುದ್ಧ ಕಬ್ಜಾದ ಹಕ್ಕುಗಳು ಪ್ರಾಪ್ತವಾಗುತ್ತವೆ. ಈ ಹಕ್ಕು ನ್ಯಾಯಾನುಸಾರವಾಗಿ ಆರಂಭವಾಗದಿದ್ದರೂ ನಿರ್ದಿಷ್ಟ ವೇಳೆಯಲ್ಲಿ ಈ ಹಕ್ಕನ್ನು ಅಲ್ಲಗಳೆಯದಿದ್ದಲ್ಲಿ ಅದು ಕಾಲಾವಧಿಯ ಅನಂತರ ಪೂರ್ಣ ಮಾಲ್ಕಿಹಕ್ಕಿಗೆ ಪರಿವರ್ತನೆಯಾಗುತ್ತದೆ.

         

  (ಎಂ.ಕೆ.ಎಸ್.ಡಬ್ಲ್ಯೂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ